ಬಾಡ್ಯಾನ್, ಜೀನ್
1530-96. ಫ್ರಾನ್ಸಿನ ರಾಜಕೀಯ ತತ್ತ್ವಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞ. ಪ್ರಮುಖ ದರ್ಜಿಯೊಬ್ಬನ ಮಗನಾದ ಈತ ಹುಟ್ಟಿದ್ದು ಆಂಗರ್ಸ್‍ನಲ್ಲಿ. 15 ಅಥವಾ 16ನೆಯ ವಯಸ್ಸಿನಲ್ಲಿ ಈತನನ್ನು ಆಂಗರ್ಸ್‍ನಲ್ಲಿಯ ಕಾರ್ಮೆಲೈಟ್ ಹೌಸ್‍ನಲ್ಲಿ ಸಂನ್ಯಾಸಿಯಾಗಿ ಸೇರಿಸಲಾಯಿತು. ಮೂರು ವರ್ಷಗಳ ಅನಂತರ ಸಂನ್ಯಾಸೀ ಮಟ್ಟದ ಶಿಕ್ಷಣ ಪೂರ್ತಿಗೊಳಿಸಲು ಈತನನ್ನು ಪ್ಯಾರಿಸ್‍ಗೆ ಕಳುಹಿಸಲಾಯಿತು. 1551ರಲ್ಲಿ ಪರಿಸ್ಥಿತಿಯ ಒತ್ತಡದಿಂದಾಗಿ ಸಂನ್ಯಾಸಿ ಜೀವನದಿಂದ ಬಿಡುಗಡೆ ಹೊಂದಿದ. ಅನಂತರ ಕಾನೂನುಶಾಸ್ತ್ರದ ಅಧ್ಯಯನಕ್ಕಾಗಿ ತೂಲ್‍ಹೌಸಿಗೆ ತೆರಳಿದ. ಅಲ್ಲಿ 1561ರ ತನಕ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದ. 1561ರಲ್ಲಿ ವಕೀಲಿ ವೃತ್ತಿ ಕೈಗೊಳ್ಳುವ ಸಲುವಾಗಿ ಕಾನೂನು ಶಾಸ್ತ್ರದ ಬೋಧನೆ ಬಿಟ್ಟು ಅವೋ ಕೇಟ್ ಡು-ರಾಯ್ ಆಗಿ ಪ್ಯಾರಿಸ್‍ಗೆ ಹಿಂತಿರುಗಿ ಅಲ್ಲಿ ವಕೀಲಿವೃತ್ತಿ ಕೈಗೊಂಡ. ಆಗ ತಾನೇ ಕ್ರೈಸ್ತರ ಮತ್ತು ಫ್ರಾನ್ಸಿನ ಪ್ರಾಟೆಸ್ಟಂಟರ ನಡುವೆ ಅಂತರ್ಯುದ್ಧಗಳು ಆರಂಭವಾಗಿದ್ದುವು. ಆಗ ಬಾಡ್ಯಾನ್ ರಾಜಕೀಯ ಮತ್ತು ಆರ್ಥಿಕ ಅಧ್ಯಯನಕ್ಕಾಗಿ ವಕೀಲ ವೃತ್ತಿಯನ್ನೂ ಬಿಟ್ಟುಕೊಟ್ಟ. ಇದೇ ವೇಳೆಗೆ ಈತನಿಗೆ 3ನೆಯ ಹೆನ್ರಿ ಪರಿಚಯವಾಯಿತು. ಪರಿಚಯ ಮುಂದೆ ವಿಶ್ವಾಸವಾಗಿ ಪರಿಣಮಿಸಿತು. ಹೆನ್ರಿಯ ಸಹೋದರನೂ ಡ್ಯೂಕ್-ಡಿ-ಅಲೆಂಕನ್ ಆಗಿರುವ ಫ್ರಾಂಕಾಯಿಸನಿಗೂ ಬಾಡ್ಯಾನನ ಮೆಲೆ ವಿಶ್ವಾಸ ಬೆಳೆಯಿತು. ಎಲಿಜಬೆತ್ ರಾಣಿಯ ಕೈ ಹಿಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಡ್ಯೂಕ್-ಡಿ-ಅಲೆಂಕನ್ ಹೂಡಿದ್ದ ದಾವೆಯಲ್ಲಿ ವಾದಿಸಲು ಬಾಡ್ಯಾನ್ ಆತನೊಡನೆ ಇಂಗ್ಲೆಂಡಿಗೆ ತೆರಳಿದ (1576). ಅದೇ ವರ್ಷ ಲಾವೋನ್‍ನಲ್ಲಿ ದೊರೆಯ ಅಟಾರ್ನಿಯಾಗಿ ನೇಮಕಗೊಂಡ. ಅಲ್ಲಿ ಈತನಿಗೆ ಆಡಳಿತದ ನೇರ ಸಂಪರ್ಕ ಪಡೆದ ವ್ಯಕ್ತಿಗಳ ಸ್ನೇಹ ದೊರೆಯಿತು. ಈತ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಎಸ್ಟೇಟ್ಸ್ ಜನರಲ್ ಆಫ್ ಬ್ಲಾಯ್ಸ್‍ನಲ್ಲಿಯ ವರ್ಮನ್‍ಡಾಯ್ಸ್‍ನ ಧರ್ಡ್ ಎಸ್ಟೇಟ್‍ನ ಡೆಪ್ಯೂಟಿ ಪ್ರತಿನಿಧಿಯಾಗಿ ಕಾಣಿಸಿಕೊಂಡ (1576). ಬಾಡ್ಯಾನನ ಮುತ್ಸದ್ದಿತನ ಅತೀವ ರಾಜಕೀಯ ಹಾಗೂ ವೈಯಕ್ತಿಕ ಧೈರ್ಯ ಸ್ಥೈರ್ಯಗಳಿಂದ ಕೆತೋಲಿಕ್ ಮತವನ್ನೇ ಅನುಸರಿಸತಕ್ಕುದೆಂಬ ಶ್ರೀಮಂತವರ್ಗದವರ ಮತ್ತು ಪಾದ್ರಿಗಳ ಆಗ್ರಹವನ್ನು ವಿರೋಧಿಸಿದ. ಎಲ್ಲರಿಗೂ ಆಂತರಿಕ ಸ್ವಾತಂತ್ರ್ಯವಿರಬೇಕೆಂದು ವಾದಿಸಿದ. ಭೂಮಿಯ ಒಡೆತನದ ಮೇಲೆ ಪ್ರಜೆಗಳಿಗೆ ಹಕ್ಕಿದೆ ಎಂದು ಸಾರಿದ. ಇದರಿಂದಾಗಿ ದೊರೆಯ ಅನುಗ್ರಹ ಕಳೆದುಕೊಂಡ. ಅಲ್ಲದೆ ಕಟ್ಟಾಮತಾನುಯಾಯಿಗಳ ಅಸಂತೋಷಕ್ಕೂ ಪಾತ್ರನಾದ. ಫ್ರಾನ್ಸಿನ ಪ್ರಾಟೆಸ್ಟಂಟರ ಪರವಾಗಿ ಸಂಧಾನ ನಡೆಸಿ ಅವರ ಮೇಲಿನ ಆಕ್ಷೇಪಗಳು ಸರಿಯಲ್ಲ ಎಂದ. ಸೇಂಟ್ ಬಾರ್ತ್‍ಲೋಮಿನ ಸಾಮೂಹಿಕ ಕಗ್ಗೊಲೆಯಿಂದ ಸ್ವಲ್ಪದರಲ್ಲಿ ಪಾರಾದ. 1583ರಲ್ಲಿ ಡ್ಯೂಕ್-ಡಿ-ಅಲೆಂಕನ್ ತೀರಿಕೊಂಡಮೇಲೆ ಈತ ಲಾವೋನ್‍ನ ಪ್ರೆಸಿಡಿಯಲ್ ಕೋರ್ಟ್‍ನ ವ್ಯವಹರ್ತನಾಗಿ ಕಾರ್ಯನಿರ್ವಹಿಸಿದ (1596ರ ತನಕ). 1588ರಲ್ಲಿ ಕೆತೋಲೆಕ್ ಲೀಗನ್ನು ಸೇರಿಕೊಂಡ. 1589ರಲ್ಲಿ ಲಾವೋನ್‍ನ ಪ್ರಜೆಗಳು ಕೆತೋಲಿಕ್‍ಲೀಗ್‍ಗೆ ಸೇರಿದ್ದಾರೆ ಎಂದು ಘೋಷಿಸಿದ. 1594ರಲ್ಲಿ 4 ನೆಯ ಹೆನ್ರಿಗೆ ಪ್ರಜೆಗಳ ಬೆಂಬಲ ದೊರಕಿಸಿಕೊಡುವಲ್ಲಿ ಯಶಸ್ವಿಯಾದ. ಆದರೂ ಬಾಡ್ಯಾನ್ ತನ್ನ ವಯಸ್ಸಿಗೆ ಸಹಜವಾದ ಧರ್ಮಸಂಕಟ ಎದುರಿಸಿದ. ತನ್ನ ನಿವೃತ್ತ ಜೀವನವನ್ನು ಲಾವೋನ್‍ನಲ್ಲಿ ಕಳೆದು 1596ರಲ್ಲಿ ಪ್ಲೇಗ್ ರೋಗದಿಂದ ನಿಧನಹೊಂದಿದ. ಕಟ್ಟಾ ಮತಾನುಯಾಯಿಗಳು ಅಲ್ಲಿಯೂ ಈತನನ್ನು ಬಿಡಲಿಲ್ಲ. 'ಬಾಡ್ಯಾನ್ ಒಬ್ಬ ಯಹೂದ್ಯನೂ ಅಲ್ಲದೆ, ಕ್ರೈಸ್ತನೂ ಅಲ್ಲದೆ, ತುರ್ಕನೂ ಅಲ್ಲದೆ ಒಂದು ನಾಯಿಯಂತೆ ಸತ್ತ ಎಂದು ಸಮಾಧಿಯ ಆಚೆಗೂ ಈತನನ್ನು ತೆಗಳಿದರು.
ಬಾಡ್ಯಾನ್ ಅರಿಸ್ಟಾಟಲನ ತತ್ತ್ವಾನುಯಾಯಿ : ಫ್ರೆಂಚ್ ನವಜಾಗೃತಿ ಕಲದಲ್ಲಿಯ ಪಥಭಂಜಕ ಧೀರರಲ್ಲಿ ಒಬ್ಬ. ನ್ಯಾಯಶಾಸ್ತ್ರ ಮತ್ತು ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿ ಕೀರ್ತಿ ಪಡೆದಿದ್ದಾನೆ. ತನ್ನ ಅಸಾಧಾರಣ ಶೈಕ್ಷಣಿಕ ಸಾಧನೆಯ ಫಲವಾಗಿ ಈತ ರಚಿಸಿದ ಅನೇಕ ಕೃತಿಗಳಲ್ಲಿ ಒಪಿಯನ್ನನ 'ಸಿನಿಜೆಟಿಕಾನ್ ಎಂಬ ಲ್ಯಾಟಿನ್ ಪದ್ಯಾನುವಾದ ಮೊದಲನೆಯದು. ಬಳಿಕ ಆರೇಷಿಯೋ-ಡೆ-ಇನ್ಸ್‍ಟಿಟ್ಟೆಂಡೊ-ಇನ್-ರಿಪಬ್ಲಿಕ್ ಜುವೆಂಟೆಂಟ್ ಎಂಬ ಶಿಕ್ಷಣ ಶಾಸ್ತ್ರೀಯ ಗ್ರಂಥ ಬರೆದ. 1566ರಲ್ಲಿ ವಿಶೇಷ ಮಹತ್ತ್ವದ ಮತ್ತು ಅತ್ಯಂತ ಪ್ರಾಚೀನವೆನ್ನಿಸಿದ ಇತಿಹಾಸ-ತತ್ತ್ವಶಾಸ್ತ್ರವನ್ನು ಕುರಿತ ಮೆತಾಡಸ್ ಅಂಡ್ ಫ್ಯಾಸಿಲ-ಹಿಸ್ಟೋರಿಯಾರಮ್ ಕಾಗ್ನೀಷನಮ್ ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿದ. ಈತನ ಮಹತ್ತ್ವದ ಗ್ರಂಥ ಡಿಸ್ಕೋಸ್‍ಶ ಸರ್‍ಲೆಸ್ ಕಾಸಸ್ ಡೆಲಾ ಎಂಟ್ರೀಮ್ ಚೆರಿಟಿ-ಕ್ವಿಸ್ಟ್ ಅಜರ್ಡ್‍ಹೂಯೆನ್ ಫ್ರಾನ್ಸ್ (1574). ಇದು ಬೆಲೆಸಿದ್ಧಾಂತ ಕುರಿತ ಪ್ರಬುದ್ಧ ಗ್ರಂಥ. ಮಾನವನಿಗೆ ಉಂಟಾಗುವ ಅತ್ಯಧಿಕ ವಿಪತ್ತು ಮತ್ತು ಮಾನವನಿಗೆ ಅತ್ಯಾವಶ್ಯಕವಾದ ವ್ಯವಸ್ಥೆಯ ಬಗ್ಗೆ ವ್ಯಾಸಂಗಮಾಡಿ ದಿ ಸಿಕ್ಸ್ ಲಿವರ್ಸ್ ಡೆಲಾ ರಿಪಬ್ಲಿಕ್ ಎಂಬ ಗ್ರಂಥವನ್ನು ಪ್ರಕಟಿಸಿದ. ಇದನ್ನು ಅರಿಸ್ಟಾಟಲ್ ಮತ್ತು ಮ್ಯಾಂಟಿಗ್ಯೂವಿನ ರಾಜ್ಯಶಾಸ್ತ್ರದ ಗ್ರಂಥಗಳ ಸಾಲಿಗೆ ಸೇರಬಲ್ಲ ಕೃತಿಯೆಂದು ವಿದ್ವಾಂಸರ ಹೇಳಿಕೆ.

ಕೊಲಾಕ್ವಿಯಮ್ ಹೆಪ್ಪಾಪ್ಲೊಮೆರಿಸ್ ಡೆ ಅಬ್ಡಿಟೀಸ್ ರೇರಮ್ ಸಬ್‍ಲೈಮಿಯಮ್ ಆರ್ಕೇನಿಸ್ ಎಂಬ ಕೃತಿ ಅಪ್ರಕಟಿತವಾಗಿಯೇ ಉಳಿದಿತ್ತು. 1857ರಲ್ಲಿ ಪೂರ್ಣ ಪ್ರಕಟವಾಯಿತು. ಇದು ವಿಭಿನ್ನಮತ ಶ್ರದ್ಧೆಗಳಿಗೆ ಸೇರಿದ ಮತ್ತು ಸಾರ್ವಜನಿಕ ನೀತಿ ಹಾಗೂ ರಾಷ್ಟ್ರೀಯ ಹಿತಕ್ಕೆ ಸಂಗತವಾಗಬಲ್ಲ ವ್ಯಾಪಕ ಸಹಿಷ್ಣುತೆ ಇರಬೇಕೆಂದು ವಾದಿಸುವ ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣಾರೂಪದ ಕೃತಿ. 				
(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ